ಬೆಂಗಳೂರು: ರಾಜ್ಯದ ಕೃಷಿ ವಲಯದಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹ್ಹಾಣ್ ಶನಿವಾರ ರಾಜ್ಯದ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯದ ಉನ್ನತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆ ಬಳಿಕ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶಿವರಾಜ್ ಸಿಂಗ್ ಚೌಹ್ಹಾಣ್, ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣ ಯೋಜನೆಗಳಾಗಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಕೇಳಲಾಗಿದೆ ಎಂದು ತಿಳಿಸಿದರು.
PM ಆವಾಸ್ ಯೋಜನೆಯಡಿ ಹೆಚ್ಚುವರಿ ಮನೆ ಮಂಜೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 4 ಲಕ್ಷಕ್ಕೂ ಹೆಚ್ಚಿನ ಮನೆ ಮಂಜೂರು ಮಾಡಲಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಕರ್ನಾಟಕಕ್ಕೆ ಸುಮಾರು 7.5 ಲಕ್ಷ ಮನೆಗಳನ್ನು ನೀಡಿದ್ದೇವೆ ಎಂದರು.
ಈ ಹಿಂದೆ ಬಿಡುಗಡೆಯಾದ ಹಣ ಬಳಸಿಕೊಳ್ಳಿ: ರೈತರಿಗೆ ಸಬ್ಸಿಡಿ ನೀಡುವ ಕೃಷಿ ಯಾಂತ್ರೀಕರಣ ಯೋಜನೆಗಳಿಗೆ ಹೆಚ್ಚಿನ ಹಣವನ್ನು ಕರ್ನಾಟಕ ಕೇಳಿದೆ. ಈ ಹಿಂದೆ ಬಿಡುಗಡೆಯಾದ ಹಣವನ್ನು ಬಳಸಿಕೊಳ್ಳಿ, ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದೇನೆ. ಕರ್ನಾಟಕ ಕೃಷಿ ತಂತ್ರಜ್ಞಾನ ನಿರ್ವಹಣಾ ಏಜೆನ್ಸಿ (ATMA) ಯೋಜನೆಯಡಿ ಸಿಬ್ಬಂದಿ ಹೆಚ್ಚಳ ಕೇಳಿದ್ದು, ಅದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಜಲಾನಯನ ಯೋಜನೆಗೆ ರೂ.97 ಕೋಟಿ ಬಿಡುಗಡೆ: ಈ ಹಿಂದಿನ ಅನುದಾನ ಬಳಕೆಯಾಗಿರುವುದರಿಂದ ಇಂದು ಜಲಾನಯನ ಯೋಜನೆಗಳಾಗಿ ರೂ. 97 ಕೋಟಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.